ತುಮಕೂರು : ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆಯ ವತಿಯಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿನ ಕ್ಷೌರಿಕರಿಗೆ ಆಗುತ್ತಿರುವ ಕುಂದುಕೊರತೆ ಮತ್ತು ತರಬೇತಿ ಶಿಬಿರಗಳನ್ನು ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರದಲ್ಲಿ ನಡೆಸುವಂತೆ ಕೋರಿ ಮನವಿಯನ್ನು ಅಧ್ಯಕ್ಷರಾದ ಕಟ್‍ವೆಲ್ ರಂಗನಾಥ್‍ರವರು ಇಂದು ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್‍ರವರಿಗೆ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವಪಡೆಯ ಜಿಲ್ಲಾಧ್ಯಕ್ಷರಾದ ಕಟ್‍ವೆಲ್ ರಂಗನಾಥ್ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಕ್ಷೌರಿಕ ವೃತ್ತಿಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯಲ್ಲಿ ಸವಿತಾ ಸಮಾಜದ ನೂರಾರು ಕುಟುಂಬಗಳು ಕಳೆದ 5 ತಿಂಗಳ ಹಿಂದೆ ಅರ್ಜಿಗಳನ್ನು ಸಲ್ಲಿಸಿರುತ್ತಾರೆ, ಅದರಲ್ಲಿ ಇಲ್ಲಿಯವರೆವಿಗೂ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಕೇಂದ್ರ ಸ್ಥಾನವಾದ ತುಮಕೂರಿನಲ್ಲಿ ತರಬೇತಿ ನಡೆಯುತ್ತಿದೆ, ಆದರೆ ತರಬೇತಿಯು ತುಮಕೂರು ನಗರದಲ್ಲಿ ನಡೆಯುತ್ತಿರುವುದರಿಂದ ದೂರದ ತಾಲ್ಲೂಕು ಮತ್ತು ಅಲ್ಲಿನ ಗ್ರಾಮಗಳಿಂದ ಜನರು ತುಮಕೂರು ನಗರಕ್ಕೆ ತರಬೇತಿಗೆ ಆಗಮಿಸಲು ಬಹಳ ಕಷ್ಠಕರವಾಗುತ್ತಿದೆ, ಇದನ್ನು ಮನಗಂಡು ತುಮಕೂರು ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ತರಬೇತಿಯನ್ನು ಆಯೋಜಿಸುವುದರಿಂದ ಜನರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎಂದರು.
ನಂತರ ಮಾತನಾಡಿದ ಮಾಜಿ ಸಚಿವರಾದ ಸೊಗಡು ಶಿವಣ್ಣ ವಿಶ್ವಕರ್ಮ ಯೋಜನೆಯ ಸಫಲತೆ ಆಗಬೇಕೆಂದರೆ ಶಿಬಿರ ನಡೆಸುತ್ತಿರುವವರು ಸರಿಯಾಗಿ ತರಬೇತಿಯನ್ನು ನೀಡಬೇಕು, ಪ್ರಸ್ತುತ ತರಬೇತಿಯು ಸರಿಯಾಗಿ ನೀಡುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ, ತರಬೇತಿಗೆ ಹಾಜರಾಗಿದ್ದವರ ಹಾಜರಾತಿಯನ್ನು ಮಾತ್ರ ದೃಢೀಕರಿಸಿ, ಅದೇ ಫಲಾನುಭವಿಗಳಿಂದ ತರಬೇತಿಗೆ ಬರುವವರಿಗೆ ಕೇಶ ವಿನ್ಯಾಸ ಮಾಡಿಸಿ, ಅದರ ಫೋಟೋ ವಿಡಿಯೋ ಮಾಡಿ, ತರಬೇತಿ ನೀಡಿರುವ ಹಾಗೆ ಬಿಂಬಿಸಿ, ಸರ್ಕಾರಕ್ಕೆ ಮತ್ತು ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ, ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ವಿಶ್ವಕರ್ಮ ಯೋಜನೆಯ ಸಫಲತೆಯನ್ನು ಫಲಾನುಭವಿಗಳು ಪಡೆಯುವಂತೆ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾದ ಧನೀಯಾ ಕುಮಾರ್ ಮಾತನಾಡಿ ಈ ಯೋಜನೆಯ ಬಗ್ಗೆ ಉಪನ್ಯಾಸ ನೀಡುವುದರಿಂದ ಕ್ಷೌರಿಕ ವೃತ್ತಿಯಲ್ಲಿ ಹೊಸತನವನ್ನು ಕಲಿಸಿಕೊಡಲು ಸಾಧ್ಯವಿಲ್ಲ, ಅದರ ಬದಲಾಗಿ ಕೌಶಲ್ಯಾಧಾರಿತ ಕಲಿಕೆಯನ್ನು ಕಲಿಸಿಕೊಡಲು ಜಿಲ್ಲಾಧಿಕಾರಿಗಳು ತರಬೇತಿ ನೀಡುವವರಿಗೆ ಅಥವಾ ಸಂಪನ್ಮೂಲ ವ್ಯಕ್ತಿಗಳಿಗೆ ಆದೇಶ ಮಾಡಬೇಕಿದೆ ಎಂದರಲ್ಲದೇ ಈಗಾಗಲೇ ಒಂದು ಬ್ಯಾಚ್ ತರಬೇತಿ ಪೂರ್ಣಗೊಂಡಿದೆ, ಆ ಬ್ಯಾಚ್‍ನಲ್ಲಿ ತರಬೇತಿ ಪಡೆದಿರುವವರ ನೋವು ಮುಂಬರುವ ಬ್ಯಾಚ್‍ಗಳವರು ಪಡೆಯಬಾರದು ಎಂಬ ಸದುದ್ದೇಶದಿಂದ ಜಿಲ್ಲಾ ಸವಿತಾ ಸಮಾಜದ ಯುವಪಡೆಯವರು ಮುಂದೆ ಬಂದಿದ್ದು ಆ ಕಾರ್ಯಕ್ಕೆ ಜಿಲ್ಲಾಡಳಿತವು ಸಕಾರಾತ್ಮಕವಾಗಿ ಸ್ಪಂದಿಸಿ ವಿಶ್ವಕರ್ಮ ಯೋಜನೆಯನ್ನು ಪರಿಪೂರ್ಣಗೊಳ್ಳು ಸಹಕಾರ ಮಾಡಬೇಕು ಎಂದು ಕೋರಿದರು, ಜೊತೆಗೆ ವಿಶ್ವಕರ್ಮ ಯೋಜನೆಯ ಅರ್ಜಿಗಳು ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಉಳಿಸಿಕೊಂಡಿರುವುದು ಕೇಳಿ ಬರುತ್ತಿದೆ, ಅವುಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವಂತೆ ಮನವಿ ಮಾಡಿದರು.
ನಂತರ ಎಲ್ಲರ ಅಹ್ವಾಲುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತಮ್ಮ ಮನವಿಯನ್ನು ಆದಷ್ಟು ಶೀಘ್ರವಾಗಿ ಕಾರ್ಯರೂಪಕ್ಕೆ ತಂದು ಮುಂದಿನ ದಿನಗಳಲ್ಲಿ ನಡೆಯುವ ತರಬೇತಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು ಮತ್ತು ತರಬೇತಿಗೆ ಆಗಮಿಸುವವರಿಗೆ ಯಾವುದೇ ರೀತಿಯಾದ ಕುಂದು ಕೊರತೆ ಆಗದಂತೆ ಜಿಲ್ಲಾಡಳಿತವು ಕ್ರಮ ವಹಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸೊಗಡು ಶಿವಣ್ಣ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನೀಯಾ ಕುಮಾರ್, ಜಿಲ್ಲಾ ಸವಿತಾ ಸಮಾಜ ಯುವಪಡೆಯ ಜಿಲ್ಲಾಧ್ಯಕ್ಷರಾದ ಕಟ್‍ವೆಲ್ ರಂಗನಾಥ್, ತಾಲ್ಲೂಕು ಪ್ರತಿನಿಧಿ ಸುರೇಶ್, ಚಂದ್ರಶೇಖರ್, ಕಾರ್ಯದರ್ಶಿ ಉಮೇಶ್, ಟಿ.ಡಿ.ಪುನೀತ್, ಪ್ರವೀಣ್, ಶ್ರೀಧರ್ ಹಾಗೂ ಇತರರು ಉಪಸ್ಥಿತರಿದ್ದರು.