ತುರುವೇಕೆರೆ: ಪಟ್ಟಣದ ಲಯನ್ಸ್ ಕ್ಲಬ್, ಲಯನ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿನಿಗೆ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ 30 ಸಾವಿರ ರೂಗಳ ಆರ್ಥಿಕ ನೆರವನ್ನು ನೀಡಲಾಯಿತು.
ಲಯನ್ಸ್ ಸಂಸ್ಥಾಪಕ ಕಾರ್ಯದರ್ಶಿ ಡಾ.ಎ. ನಾಗರಾಜ್ ಮಾತನಾಡಿ, ಸೇವಾ ಕ್ಷೇತ್ರದಲ್ಲಿ ಲಯನ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸಾಮಾಜಿಕ ಕಳಕಳಿ, ಸಮಾಜದಲ್ಲಿನ ಅಶಕ್ತರು, ಅಸಹಾಯಕರಿಗೆ ಅಗತ್ಯ ನೆರವು ನೀಡುವುದೇ ಲಯನ್ಸ್ ನ ಗುರಿಯಾಗಿದೆ ಎಂದರು.
ಪ್ರತಿ ವರ್ಷ ಲಯನ್ಸ್ ವತಿಯಿಂದ ಶಾಲೆಗಳಿಗೆ ಪಾಠೋಪಕರಣ, ಪೀಠೋಪಕರಣ, ವಿಕಲಚೇತನರಿಗೆ ತ್ರಿಚಕ್ರ ಸೈಕಲ್, ತೀವ್ರತರ ಕಾಯಿಲೆ ಇರುವ ರೋಗಿಗೆ ಚಿಕಿತ್ಸೆಗೆ ಧನ ಸಹಾಯಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಪುಸ್ತಕ ವಿತರಣೆ, ಆರೋಗ್ಯ ಶಿಬಿರ, ನೇತ್ರ ತಪಾಸಣೆ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಅದೇ ರೀತಿ ಈ ಬಾರಿ ಬೆಂಗಳೂರು ದಕ್ಷಿಣದಲ್ಲಿರುವ ವಿಜಯ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಶೇ.92 ಅಂಕ ಗಳಿಸಿರುವ ಸ್ಪಂದನ ಎಂಬ ವಿದ್ಯಾರ್ಥಿನಿಗೆ ಮುಂದಿನ ವ್ಯಾಸಂಗಕ್ಕಾಗಿ ಲಯನ್ಸ್ ವತಿಯಿಂದ 30ಸಾವಿರ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಲೋಕೇಶ್, ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ಲಯನ್ಸ್ ಪದಾಧಿಕಾರಿಗಳಾದ ಗಂಗಾಧರ ದೇವರಮನೆ, ರವಿ, ವಿದ್ಯಾರ್ಥಿನಿ ಸ್ಪಂದನ ಪೋಷಕರಾದ ಭಾಸ್ಕರ್, ಯಶೋಧ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ