ತುಮಕೂರು : ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಹಾಗೂ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಂಯುಕ್ತವಾಗಿ ವಿಶ್ವ ಪರಿಸರ ದಿನಾಚರಣೆ ಆಚರಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಎಲೆಕ್ಟ್ರಿಕ್ ವಾಹನಗಳ ಕೊಡುಗೆ ಕುರಿತ ವಿಶೇಷ ಕಾರ್ಯಕ್ರಮ ನಡೆಸಲಾಯಿತು.
ನಗರದ ಎಸ್‍ಎಸ್‍ಐಟಿ ಸ್ಟೆಫ್ ಸೆಮಿನಾರ್ ಹಾಲ್‍ನಲ್ಲಿ ಸಿವಿಲ್ ಇಂಜಿನಿಯರ್ ವಿಭಾಗ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಆ್ಯಡಮ್ಸ್ ಮಾರ್ಕೇಟಿಂಗ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ ಗೋಂಧಳಿ ಅವರು ಉದ್ಘಾಟಿಸಿ ಮಾತನಾಡಿದರು.
ಗಿಡ ನೆಡುವುದಷ್ಟೆ ಅಲ್ಲದೆ ಅದನ್ನು ಪೋಷಿಸಬೇಕು. ಆಗ ಮಾತ್ರ ಪರಿಸರದ ಬೆಳವಣಿಗೆ ಸಾಧ್ಯ. ಇತ್ತಿಚಿಗೆ ಗಿಡಗಳನ್ನು ಬೆಳಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಾಶಸ್ತ್ಯ ಸಿಗುತ್ತಿಲ್ಲ. ಮುಂದಿನ ದಿನದಲ್ಲಿ ಗಿಡ-ಮರ ಬೆಳೆಸುವುದರ ಮೂಲಕ ಲಕ್ಷಾಂತರ ಜನಕ್ಕೆ ಉತ್ತಮವಾದ ಗಾಳಿ, ದಣಿದು ಬಂದವರಿಗೆ ನೆರಳು ನೀಡುವ ಸಾಮಾಜಿಕ ಜಾಗೃತಿ ನಡೆಯಬೇಕು ಎಂದರು.
ಸಾಹೆ ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಡಾ. ಕೆ. ಬಿ ಲಿಂಗೇಗೌಡ ಮಾತನಾಡಿ, ಪ್ರತಿಯೊಬ್ಬ ಮನೆಯಲ್ಲಿ ಒಂದು ಗಿಡ ನೆಟ್ಟರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾದ್ಯ. ಪರಿಸರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿನಿತ್ಯಪಾಲನೆಮಾಡಬೇಕು. ಒಬ್ಬ ವ್ಯಕ್ತಿ ಒಂದು ಗಿಡ ಬೆಳೆಸುವುದರಿಂದ ರಾಜ್ಯಕ್ಕೆ ಒಂದು ಕೊಡುಗೆ ಕೊಡಬೇಕು ಎಂದು ಕರೆ ನೀಡಿದರು.
ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್ ಮಾತನಾಡಿ, ಬೃಹತ್ ನಗರಗಳಲ್ಲಿ ಗಿಡಗಳ ಸಂಖ್ಯೆ ಕಡಿಮೆಯಾಗಿದೆ. ಕಟ್ಟಡಗಳು ಹೆಚ್ಚಾಗುತ್ತಿವೆ. ಇದ್ದರಿಂದಾಗಿ ಜೀವನದಲ್ಲಿ ನಾವೆಲ್ಲರೂ ಒಂದು ಗಿಡವನ್ನು ನೆಡಬೇಕು ಎಂದರು.
ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಅವರು ಮಾತನಾಡಿ, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅನೇಕ ಗಿಡಮರಗಳನ್ನು ಬೆಳಸಿದರು. ಅವರಂತೆ ನಾವು ಗಿಡವನ್ನು ನೆಟ್ಟು-ಉಳಿಸಿ ಅದಕ್ಕೆ ಸರಿಯಾದ ರೀತಿಯಲ್ಲಿ ನೀರು ಹಾಕಿ ಪೊಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡೀನ್ ಡಾ.ರೇಣುಕಾಲತಾ, ಡಾ.ರಾಜಾನಾಯಕ್, ಸಿವಿಲ್ ಇಂಜಿನಿಯರ್ ಮುಖ್ಯಸ್ಥರಾದ ಡಾ.ಬಿ.ಹಚ್ ಮಂಜುನಾಥ, ಐಕ್ಯೂಎಸಿ ಸಂಯೋಜಕರಾದ ಡಾ.ರವಿರಾಮ್, ಸಂಯೋಜಕರಾದ ಎಂ. ರಾಕೇಶ್, ಡಾ.ಸೌಜನ್ಯ , ಎನ್‍ಸಿಸಿ ಮತ್ತು ಎನ್ ಎಸ್ ಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.