ತುರುವೇಕೆರೆ: ತಾಲೂಕಿನ ಕೊಂಡಜ್ಜಿ ವಲಯದ ಮಾಚೇನಹಳ್ಳಿ ಕಾರ್ಯಕ್ಷೇತ್ರದ ಬಾಪೂಜಿ ಕೇಂದ್ರೀ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಅನಿತಾ ಮಾತನಾಡಿ, ಮಗುವಿನ ಪೋಷಣೆಯಲ್ಲಿ ತಾಯಿಯ ಪಾತ್ರ ಎಷ್ಟು ಮಹತ್ವದ್ದೋ, ಜೀವ ಸಂಕುಲದ ಉಳಿವಿನಲ್ಲಿ ಪರಿಸರದ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಸಂರಕ್ಷಿಸಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದರು.
ಯೋಜನಾಧಿಕಾರಿ ಅನಿತಾಶೆಟ್ಟಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸಸಿನೆಡುವಿಕೆ, ಕೆರೆ ಅಭಿವೃದ್ಧಿ, ಕೃಷಿಗೆ ಪ್ರೋತ್ಸಾಹ ಎಲ್ಲವೂ ನಮ್ಮ ಪ್ರಕೃತಿಯನ್ನು ಸಂರಕ್ಷಣೆಯ ಪೂರಕ ಕಾರ್ಯಗಳಾಗಿದೆ. ಸಂಘದ ಸದಸ್ಯರು ತಮ್ಮ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕರ ಸಮಾಜ ಕೊಡುಗೆಯಾಗಿ ನೀಡಬೇಕೆಂದರು.
ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಗಣ್ಯರಿಗೆ, ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಶಾಲೆಯ ಮುಖ್ಯೋಫಾಧ್ಯಾಯ ರಾಜಪ್ಪ, ಒಕ್ಕೂಟದ ಅಧ್ಯಕ್ಷ ಲೋಕೇಶ್, ಸಹಾಯಕಿ ಮೈತ್ರಮ್ಮ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ*