ತುರುವೇಕೆರೆ: ತಾಲೂಕಿನ ಗೋಣಿತುಮಕೂರು ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಗಣ್ಯರಿಗೆ ವಿವಿಧ ರೀತಿಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
|
ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಯಶೋಧರ್ ಮಾತನಾಡಿ, ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಉಳಿಸು ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆಯು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಪರಿಸರ ಶುದ್ಧವಾಗಿರಬೇಕಾದರೆ ಪರಿಶುದ್ಧವಾದ ಗಾಳಿ ಬೇಕು, ಶುದ್ಧ ಗಾಳಿ ದೊರೆಯಬೇಕಾದರೆ ಮರಗಿಡಗಳ ರಕ್ಷಣೆ ಮಾಡಬೇಕು. ಮರಗಳನ್ನು ಕಡಿದು ವನಸಂಪತ್ತನ್ನು ಹಾಳುಮಾಡುವುದರಿಂದ ಶುದ್ಧ ಗಾಳಿಯ ಕೊರತೆ ಉಂಟಾಗುತ್ತದೆ. ಸಮಾಜದಲ್ಲಿ ಅನಾರೋಗ್ಯ ಉಂಟಾಗಿ ಪರಿಸರ ಹಾಳಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಬೇಕು ಎಂದರು.
ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ದಿನಾಚರಣೆಗೆ ಆಗಮಿಸಿದ್ದ ಗಣ್ಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ನೇರಳೆ, ಹಲಸು, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ಹೊಂಗೆ ಸೇರಿದಂತೆ ವಿವಿಧ ಜಾತಿಗೆ ಸೇರಿದ 250 ಗಿಡಗಳನ್ನು ವಿತರಿಸಲಾಯಿತು. ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲಿ ಗ್ರಾಮದ ಮುಖಂಡರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ