ತಿಪಟೂರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಿಪಟೂರು(ರಿ), ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ, ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ಬಾಲಕಾರ್ಮಿಕ ನಿರ್ಮೂಲನ ಅಭಿಯಾನದ ಉದ್ಘಾಟನಾ ಸಮಾರಂಭವನ್ನು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕಾನೂನು ಸೇವಾ ಸಮಿತಿಯ ವಿ.ದೀಪಾ ರವರು ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಾ,ಬಾಲ ಕಾರ್ಮಿಕ ನಿರ್ಮೂಲನೆಯ ಬಗ್ಗೆ ಒಂದಷ್ಟು ಕಾನೂನು ಅರಿವು ಮೂಡಿಸುವುದರ ಜೊತೆಗೆ ಬಾಲಕಾರ್ಮಿಕ ಪದ್ಧತಿಯನ್ನು ಯಾವ ರೀತಿಯಲ್ಲಿ ನಿಯಂತ್ರಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ನಟರಾಜುರವರು ಬಾಲಕಾರ್ಮಿಕರೆಂದರೆ ಯಾರು, ಯಾವ ವಯಸ್ಸಿನವರನ್ನು ಬಾಲಕಾರ್ಮಿಕರೆಂದು ಕರೆಯುತ್ತಾರೆ, ಕಾನೂನು ವ್ಯಾಪ್ತಿಯಲ್ಲಿ ಬಾಲಕಾರ್ಮಿಕರನ್ನು ನಿರ್ಮೂಲನ ಮಾಡುವುದು ಹೇಗೆ, ವಿದ್ಯಾಭ್ಯಾಸ ಕಲಿಯುವ ಸಂದರ್ಭದಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು. ಈ ಅನಿಷ್ಠ ಪದ್ಧತಿಯನ್ನು ನಿರ್ಮೂಲ ಮಾಡುವುದಕ್ಕೆ ಕಾನೂನು ಯಾವ ರೀತಿಯ ತಿದ್ದುಪಡಿಯನ್ನು ಮಾಡಿದೆ ಎಂಬುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ನಿರೀಕ್ಷಕರಾದ ವೆಂಕಟೇಶ್ ರವರು ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು ಇದನ್ನು ನಾಶ ಮಾಡುವುದರಿಂದ ದೇಶದ ಭವಿಷ್ಯ ಉಜ್ವಲವಾಗುತ್ತದೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಕಾರ್ಮಿಕರ ಮಕ್ಕಳಿಗೆ ಯಾವ ಯಾವ ರೀತಿಯ ಸೌಲಭ್ಯಗಳು ದೊರೆಯುತ್ತವೆ ಎಂಬುವುದರ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರಾದ ವಿ. ದೀಪ ರವರು, ತಿಪಟೂರು ವಕೀಲರ ಸಂಘದ ಉಪಾಧ್ಯಕ್ಷರಾದ ನಟರಾಜು, ಸಂಘದ ಕಾರ್ಯದರ್ಶಿಯಾದ ಮಲ್ಲಿಕಾರ್ಜುನಯ್ಯ, ಕಾರ್ಮಿಕ ನಿರೀಕ್ಷಕರಾದ ವೆಂಕಟೇಶ್, ಬಾಲಕರ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ಶಿವಕುಮಾರ್, ಉಪ ಪ್ರಾಂಶುಪಾಲರಾದ ಉಮೇಶ್ ಗೌಡ, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.