ಮಧುಗಿರಿ : ಜಿಲ್ಲಾ ಉಪನಿರ್ದೇಶಕ ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಮುಂದಿನ 24-25 ರ ಶೈಕ್ಷಣಿಕ ಸಭೆಯನ್ನು ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯನ್ನು ಉದ್ದೇಶಿಸಿ ಉಪನಿರ್ದೇಶಕರಾದ ಗಂಗಾಧರ್ ಮಾತನಾಡಿ ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ತರುವಲ್ಲಿ ಜಿಲ್ಲೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಶ್ರಮಿಸಿದ್ದಾರೆ, ಹಾಗೆಯೇ ಮುಂದಿನ ಶೈಕ್ಷಣಿಕ ವರ್ಷವೂ ಇನ್ನಷ್ಟು ಹೆಚ್ಚಿನ ಫಲಿತಾಂಶಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಕಾಲೇಜು ಪ್ರಾರಂಭದ ದಿನದಿಂದಲೇ ಖಾಲಿ ಇರುವ ಹುದ್ದೆಗಳ ಸ್ಥಳಗಳಿಗೆ ನಿಯೋಜಿತ ಉಪನ್ಯಾಸಕರನ್ನು ನಿಯೋಜಿಸಬೇಕು, ಹಾಗು ಕಾಲೇಜಿನ ಶೌಚಾಲಯಗಳ ವ್ಯವಸ್ಥೆ, ವಿವೇಕ ಯೋಜನೆಯ ಅಡಿಯಲ್ಲಿ ಮಂಜೂರು ಅದ ಕೊಠಡಿಗಳ ಮಾಹಿತಿ, ಇತ್ತೀಚಿನ ದಿನಗಳಲ್ಲಿ ತಂಬಾಕು ಉತ್ಪನ್ನಗಳು ಮಕ್ಕಳ ಮೇಲೆ ಅತಿಯಾದ ಪರಿಣಾಮ ಬೀರುತ್ತಿದ್ದು, ಕಾಲೇಜುಗಳ ಸುತ್ತ 100 ಮೀಟರ್ ದೂರದಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಅಶ್ವತ್ ನಾರಾಯಣ್, ಕೃಷ್ಣ ಮೂರ್ತಿ, ಶಾಖಾಧಿಕಾರಿ ಉಮಾ, ಇತರರಿದ್ದರು.