ದಿನಾಂಕ 30.05.2024 ರಂದು ಬೆಳಗ್ಗೆ 11 ಗಂಟೆಗೆ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಅವರ ಮನೆ ಮುಂದೆ ತುಮಕೂರು ಜಿಲ್ಲಾ ಹೇಮಾವತಿ ನೀರಾವರಿ ಹೋರಾಟ ಸಮಿತಿಯು ಧರಣಿ ನಡೆಸಲು ನಿಶ್ಚಯಿಸಿರುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಇಂದು ತುಮಕೂರು ನಗರದ ಸುಧಾ ಟಿ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಹೇಮಾವತಿ ನೀರು ನಮ್ಮದು ನಮ್ಮ ನೀರು ನಮ್ಮ ಹಕ್ಕು ವಿಚಾರವಾಗಿ ರಾಮನಗರ ಜಿಲ್ಲೆಯ ಮಾಗಡಿಗೆ ಎಕ್ಸಪ್ರೆಸ್ ಕೆನಾಲ್ ಪೈಪ್ ಲೈನ್ ಮೂಲಕ ನೀರು ನೀಡಲು ಸುತಾರಾo ಸಾಧ್ಯವೇ ಇಲ್ಲ ಎಂದು ಸೊಗಡು ಶಿವಣ್ಣ ಪುನರುಚ್ಚರಿಸಿದರು.
ತುಮಕೂರು ಜಿಲ್ಲೆಗೆ ಕಾವೇರಿ ಟ್ರಿಬುನಲ್ ಸಮಿತಿಯಲ್ಲಿ ಕೋರ್ಟ್ ಆದೇಶದಂತೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರನ್ನು ಇದುವರೆಗೂ ನಾವು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಹೇಮಾವತಿ ನಾಲೆಯು ಆಧುನಿಕರಣಗೊಂಡಿದ್ದು ನಮಗೆ ಹಂಚಿಕೆಯಾಗಿರುವ ನೀರನ್ನು ತುಮಕೂರು ಜಿಲ್ಲೆಯ ಜನತೆ ಪಡೆಯುತ್ತೇವೆ ಎಂಬ ವಿಶ್ವಾಸ ಮೂಡುವುದರ ನಡುವೆಯೇ ನಮ್ಮ ನೀರಿಗೆ ರಾಮನಗರದ ಡಿ.ಕೆ ಶಿವಕುಮಾರ್ ಕಿಂಡಿ ತೋಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವಾರ ಬಂದಂತ ಬೃಹತ್ ಪೈಪುಗಳನ್ನು ವಾಪಸ್ ಕಳುಹಿಸಲಾಗಿದ್ದರೂ ಕೂಡ ಮತ್ತೆ ಮತ್ತೆ ಆ ಪೈಪುಗಳನ್ನು ತುಂಬಿಕೊಂಡ ಲಾರಿಗಳು ಗುಬ್ಬಿ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವುದು ಜಿಲ್ಲೆಯ ಜನರ ನೆಮ್ಮದಿ ಕೆಡಿಸಿದೆ ಎಂದರು.
ತುಮಕೂರು ಜಿಲ್ಲೆಯ ಜನರ ಜೀವನಾಡಿಯಾಗಿರುವಂತ ಹೇಮಾವತಿ ನೀರಿಗೆ ಕಳ್ಳರು ಕಿಂಡಿ ತೋಡಲಾರಂಭಿಸಲಾಗಿದ್ದು ಈ ಯೋಜನೆ ಜಾರಿಯಾದರೆ ತುಮಕೂರು ಜಿಲ್ಲೆಯ ರೈತರ ಹಾಗೂ ಕುಡಿಯುವ ನೀರಿಗೆ ಮರಣ ಶಾಸನ ಬರೆದಂತಾಗಿದೆ ಎಂದು ಮತ್ತೊಮ್ಮೆ ಹೇಳಿದರು.
ನಾವು ಜೈಲಿಗೆ ಹೋದರು ತೊಂದರೆ ಇಲ್ಲ. ಈ ಯೋಜನೆ ಜಾರಿಗೆ ಬಿಡುವುದಿಲ್ಲ ಎಂದು ಹೇಮಾವತಿ ಹೋರಾಟ ಸಮಿತಿಯು ತಿಳಿಸಿತು.
ರಾಮನಗರ ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣ ಹಾಗೂ ಇದರ ಅಂದಾಜು ಮೊತ್ತ ಡಿಪಿಆರ್ ಉಳ್ಳ ಎಲ್ಲಾ ದೃಡೀಕೃತ ವರದಿಗಳನ್ನು ಪಡೆಯಲಾಗಿದ್ದು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಪಿಐಎಲ್ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಹೋರಾಟ ಯಾಕೆ ಇಷ್ಟು ತೀಕ್ಷ್ಣ ಪಡೆದುಕೊಂಡಿದೆ ಎಂದರೆ ಗುಬ್ಬಿ ತುರುವೇಕೆರೆ ತುಮಕೂರು ಮಧುಗಿರಿ ಕೊರಟಗೆರೆ ಕುಣಿಗಲ್ ಹಾಗೂ ಚಿಕ್ಕನಾಯಕನಹಳ್ಳಿ ತಿಪಟೂರು ತಾಲ್ಲೂಕುಗಳಿಗೆ ಒಂದು ಬೊಗಸೆಯಷ್ಟು ಕೂಡ ನೀರು ಕೂಡ ಬರುವುದಿಲ್ಲ. ಏಕೆಂದರೆ ಈಗ ಪೈಪ್ ಲೈನ್ ಅಳವಡಿಸುತ್ತಿರುವುದು ನೈಸರ್ಗಿಕವಾಗಿ ತಗ್ಗು ಪ್ರದೇಶದಲ್ಲಿದೆ. ಇದರ ನಡುವೆಯೂ ಕೂಡ 20 ಅಡಿ ಆಳದಲ್ಲಿ ಪೈಪ್ ಲೈನ್ ಅಳವಡಿಸುತ್ತಿರುವುದರಿಂದ ಗುರುತ್ವಾಕರ್ಷಣೆ ಹೆಚ್ಚಾಗಿ ನೀರಿನ ಹರಿಯುವಿಕೆಯ ಪ್ರಮಾಣವೂ ಕೂಡ ಹೆಚ್ಚಾಗಲಿದೆ. ಹೀಗಾದಾಗ ನಮ್ಮ ನೀರು ನಮಗೆ ಹರಿಯಲು ಸಾಧ್ಯವೇ ಇಲ್ಲ ಆದ್ದರಿಂದ ಪಕ್ಷಾತೀತವಾಗಿ ಈ ಯೋಜನೆಯ ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಯೋಜನೆ ಜಾರಿಯಾಗಿದ್ದೆ ಆದಲ್ಲಿ ಒಂದೇ ಒಂದು ಅಡಿಕೆ ತೆಂಗು ಬಾಳೆ ರಾಗಿ ತೊಗರಿ ಸೇರಿದಂತೆ ಯಾವುದನ್ನು ಬೆಳೆಯಲು ಸಾಧ್ಯವೇ ಇಲ್ಲ ಎಂದು ಶಿವಣ್ಣ ತಿಳಿಸಿದರು.
ನೆಮ್ಮದಿಯಾಗಿರುವಂಥ ಬದುಕನ್ನು ಕಟ್ಟಿಕೊಂಡಿದ್ದ ತುಮಕೂರು ಜಿಲ್ಲೆಯ ರೈತಾಪಿ ಬಂಧುಗಳೆಲ್ಲರೂ ಕೂಡ ಜಮೀನು ಮಾರಾಟ ಮಾಡಿಕೊಂಡು ವಲಸೆ ಹೋಗುವಂತ ಕಾಲ ದೂರವಿಲ್ಲ.
ಆದ್ದರಿಂದ ತಾವೆಲ್ಲರೂ ಕೂಡ ಒಕ್ಕೊರಲಿನಿಂದ ಈ ಯೋಜನೆಯನ್ನು ವಿರೋಧ ಮಾಡಲು ಕಟ್ಟಿಬದ್ಧರಾಗಬೇಕೆಂದು ಕರೆ ನೀಡಿದರು .
ದಿನಾಂಕ 30.05.2024 ರಂದು ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂಭಾಗ ಪ್ರತಿಭಟನೆ ನಡೆಸಲು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುಬ್ಬಿಯ ದಿಲೀಪ್ ಕುಮಾರ್ ಬೆಟ್ಟಸ್ವಾಮಿ ಬೆಳಗುಂಬ ಪ್ರಭಾಕರ, ಪಂಚಾಕ್ಷರಯ್ಯ, ಕು. ರಾಮಣ್ಣ, ತಿಪಟೂರಿನ ಪ್ರಸನ್ನ, ಕೆ ಪಿ ಮಹೇಶ್, ಹೊಸಹಳ್ಳಿಯ ಕುಮಾರಸ್ವಾಮಿ, ತರಕಾರಿ ಮಹೇಶ್, ರಾಮಚಂದ್ರ ರಾವ್ ಶಬ್ಬೀರ್ ಅಹ್ಮದ್, ರಂಗನಾಯಕ್ ಸೌಮ್ಯಗೌಡ ಉಪಸ್ಥಿತರಿದ್ದರು,