- ಪಾವಗಡ ತಾಲ್ಲೂಕು ನಾಗಲಮಡಿಕೆಯ ಮೇವಿನ ಬ್ಯಾಂಕ್‍ಗೆ
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ
ತುಮಕೂರು: ಪಾವಗಡ ತಾಲ್ಲೂಕಿನ ನಾಗಲಮಡಿಕೆ
ಗ್ರಾಮದ ಸುಬ್ರಹ್ಮಣೇಶ್ವರ ದೇಗುಲದ ಬಳಿಯಲ್ಲಿ ಜಿಲ್ಲಾಡಳಿತ,
ತಾಲೂಕು ಆಡಳಿತ ಮತ್ತು ಪಶುಪಾಲನಾ ಇಲಾಖೆ ನೇತೃತ್ವದಲ್ಲಿ
ತೆರೆಯಲಾಗಿರುವ ಮೇವಿನ ಬ್ಯಾಂಕ್‍ಗೆ ಇಂದು ಜಿಲ್ಲಾಧಿಕಾರಿ ಶುಭ
ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇವು ಖರೀದಿಗೆ ಆಗಮಿಸಿದ್ದ ರೈತರೊಂದಿಗೆ ಮಾತನಾಡಿದ
ಅವರು, ಮೇವು ವಿತರಣಾ ಸ್ಥಳದಲ್ಲಿ ಕುಡಿಯುವ ನೀರು, ಅಗ್ನಿ
ಶಾಮಕ ದಳ, ಸಿಬ್ಬಂದಿ ನೇಮಕ ಸೇರಿದಂತೆ ಅಗತ್ಯ
ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಒಂದು ಜಾನುವಾರಿಗೆ ದಿನಕ್ಕೆ 6 ಕೆ.ಜಿ.ಯಂತೆ ವಾರಕ್ಕೆ 42 ಕೆ.ಜಿ.
ಮೇವು ವಿತರಿಸಲಾಗುತ್ತಿದ್ದು, ಒಂದು ಕೆ.ಜಿ. ಮೇವಿಗೆ ರೂ.2
ನಿಗಧಿಪಡಿಸಲಾಗಿದೆ ಎಂದರು.
ಇದೇ ಸಂದರ್ಭ ಮೇವು ಖರೀದಿಸಿ ಹೊರಟಿದ್ದ ತಿಮ್ಮಪುರದ
ಉಮಾ ಎಂಬ ಮಹಿಳೆಯನ್ನು ಮಾತನಾಡಿಸಿ ಮೇವು ಬ್ಯಾಂಕ್
ತೆರೆದಿರುವುದರಿಂದ ಆಗಿರುವ ಅನುಕೂಲದ ಬಗ್ಗೆ ಅಭಿಪ್ರಾಯ
ಪಡೆದುಕೊಂಡರು.
ಇದಕ್ಕೂ ಮುನ್ನ ಮಿಡಗೇಶಿಯಲ್ಲಿ ತೆರೆಯಲಾಗಿರುವ
ಮೇವು ಬ್ಯಾಂಕ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತದ ನಂತರ ಪಾವಗಡ ಪಟ್ಟಣದ ಅಗಸರ ಕುಂಟೆ ಕೆರೆಗೆ
ಭೇಟಿ ನೀಡಿ ಪರಿಶೀಲಿಸಿದ ಅವರು ಕೆರೆ ತುಂಬಿಸಲು ಅಗತ್ಯ ಕ್ರಮ
ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾವಗಡ ಪಟ್ಟಣದ ಹೊರವಲಯದಲ್ಲಿನ ತುಂಗಭದ್ರಾ ನೀರು
ಸಂಗ್ರಹಣಾಗಾರವನ್ನು ಪರಿಶೀಲಿಸಿ ಪೈಪ್ ಲೈನ್ ಅಳವಡಿಕೆಯನ್ನು
ಪೂರ್ಣಗೊಳಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಉಪ ವಿಭಾಗಾಧಿಕಾರಿ ಗೊಟುರು
ಶಿವಪ್ಪ, ತಹಶೀಲ್ದಾರ್ ಸಂತೋಷ್ ಕುಮಾರ್, ಪಾವಗಡ
ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್ ಸೇರಿದಂತೆ ವಿವಿಧ ಇಲಾಖೆಗಳ
ಅಧಿಕಾರಿಗಳು ಉಪಸ್ಥಿತರಿದ್ದರು.